ತಾಮ್ರಧ್ವಜ
ರತ್ನಪುರದ ಅರಸ ಮಯೂರಧ್ವಜನ ಮಗ. ತಂದೆಯ ಯಾಗ ಕುದುರೆಯನ್ನು ಕಾಯುತ್ತಿದ್ದಾಗ ಅಲ್ಲಿಗೆ ಬಂದ ಧರ್ಮರಾಯನ ಅಶ್ವಮೇಧ ಯುಗದ ಕುದುರೆಯ ಬಿರುದಿನ ಒಕ್ಕಣೆಯನ್ನು ನೋಡಿ ಕೋಪಗೊಂಡು ಅದನ್ನು ಕಟ್ಟಿಹಾಕಿಸುತ್ತಾನೆ. ಎದುರಿಸಿ ನಿಂತ ಅನಿರುದ್ಧ, ಸಾತ್ಯಕಿ, ವೃಷಕೇತು, ಕೃತವರ್ಮ, ಪ್ರದ್ಯುಮ್ನ, ಬಭ್ರುವಾಹನ ಮೊದಲಾದ ಮಹಾವೀರರುಗಳೊಡನೆಯೂ ಕೃಷ್ಣಾರ್ಜುನರೊಡನೆಯೂ ಹೋರಾಡುತ್ತಾನೆ. ಯುದ್ಧದ ಬಿಸಿ ಮುಟ್ಟಿದ ಕೂಡಲೇ ಎದುರಾಳಿಗಳು ಹಿಂದೆ ಸರಿಯುತ್ತಾರೆ. ಅರ್ಜುನ ತನ್ನ ಸಾವಿರ ರಥಗಳನ್ನು ಕಡಿದರೂ ತಾಮ್ರಧ್ವಜ ಮತ್ತೊಂದು ರಥವನ್ನೇರಿ ಯುದ್ಧ ಮುಂದುವರಿಸುತ್ತಾನೆ. ಧರ್ಮರಾಯನ ಪಕ್ಷದ ಹತ್ತು ಲಕ್ಷ ಸೈನ್ಯ ಹತವಾಗುತ್ತದೆ. ತಾಮ್ರಧ್ವಜನ ಯುದ್ಧ ವೈಖರಿಯನ್ನು ಕಂಡು ಕೃಷ್ಣಾರ್ಜುನರು ಬೆರಗಾಗುತ್ತಾರಲ್ಲದೆ ಯುದ್ಧವನ್ನು ಮುಂದುವರಿಸಿ ಮೂವರೂ ಮೂರ್ಛಿತರಾಗುತ್ತಾರೆ. ಇದರಲ್ಲಿ ಮೊದಲು ಎಚ್ಚೆತ್ತ ತಾಮ್ರಧ್ವಜ ಎದುರಾಳಿಗಳು ಮೂರ್ಛಿತರಾಗಿರುವುದನ್ನು ನೋಡಿ ಊರಿಗೆ ಹಿಂತಿರುಗುತ್ತಾನೆ.

ಇತ್ತ ಕೃಷ್ಣಾರ್ಜುನರು ಎಚ್ಚೆತ್ತು ತಾಮ್ರಧ್ವಜ ಊರಿಗೆ ಹಿಂತಿರುಗಿರುವುದನ್ನು ತಿಳಿದು ಗೋಪ್ಯವಾಗಿ ವೃದ್ಧಬ್ರಾಹ್ಮಣ ಹಾಗೂ ಶಿಷ್ಯನ ವೇಷದಲ್ಲಿ ಮಯೂರಧ್ವಜನ ಬಳಿ ಬಂದು ಆತನ ದೇಹಾರ್ಧವನ್ನು ಪತ್ನೀಪುತ್ರರಿಬ್ಬರೂ ಕತ್ತರಿಸಿಕೊಡಬೇಕೆಂದು ಬೇಡುತ್ತಾರೆ. ಅತಿಥಿಗಳನ್ನು ಯಥೋಚಿತವಾಗಿ ಸತ್ಕರಿಸಲು ಸಿದ್ಧರಾದ ತಂದೆ ತಾಯಿ ಮತ್ತು ಮಗನ ದೃಢಚಿತ್ತವನ್ನೂ ಕರ್ತವ್ಯನಿಷ್ಠೆಯನ್ನೂ ಮೆಚ್ಚಿ ಶ್ರೀಕೃಷ್ಣ ಅವರಿಗೆ ಪ್ರಸನ್ನನಾಗುತ್ತಾನೆ. ಮಯೂರ ಧ್ವಜಾದಿಗಳು ಯಾಗಶ್ವವನ್ನು ಸಂತೋಷದಿಂದ ಹಿಂದಿರುಗಿಸಿ ಧರ್ಮರಾಯನ ಯಾಗದಲ್ಲಿ ಪಾಲ್ಗೊಳ್ಳುತ್ತಾರೆ. ಈ ವಿಚಾರ ಕನ್ನಡ ಜೈಮಿನಿ ಭಾರತದಲ್ಲಿ ಬಂದಿದೆ. 				(ಆರ್.ಎನ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ